ನಂದಿಮರ
ಲಿತ್ರೇಸೀ ಕುಟುಂಬಕ್ಕೆ ಸೇರಿದ ಉಪಯುಕ್ತ ಮರ. ಲ್ಯಾಗರ್‍ಸ್ಟ್ರೋಮಿಯ ಲ್ಯಾನ್ಸಿಯೊಲೇಟ ಇದರ ಶಾಸ್ತ್ರೀಯ ಹೆಸರು. ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಕಾಣಬರುವ ಈ ಮರ ಮಹಾರಾಷ್ಟ್ರದಿಂದ ಹಿಡಿದು ಕೇರಳದ ಉದ್ದಕ್ಕೂ ಬೆಟ್ಟಸೀಮೆಗಳಲ್ಲಿ ಬೆಳೆಯುತ್ತದೆ. ನಂದಿ ಸುಮಾರು 30 ಮೀ. ಎತ್ತರಕ್ಕೆ ಬೆಳೆಯುವುದು. ಮುಖ್ಯ ಕಾಂಡವೇ ಸುಮಾರು 15 ಮೀ. ಉದ್ದವಾಗಿರುವುದುಂಟು. ತೊಗಟೆ ನಯವಾಗಿ, ಹಸಿರು ಇಲ್ಲವೆ ಹಳದಿಮಿಶ್ರಿತ ಬಿಳಿ ಬಣ್ಣದ್ದಾಗಿದೆ; ಉದ್ದುದ್ದನೆಯ ಪದರಗಳಾಗಿ ಸುಲಿದು ಬೀಳುತ್ತದೆ. ಎಲೆಗಳು ಈಟಿ ಮೊನೆಯಾಕಾರದವು. ಹೂಗಳು ಚಿಕ್ಕವು; ಪ್ಯಾನಿಕಲ್ ಮಾದರಿಯ ಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಇವುಗಳ ಬಣ್ಣ ಬಿಳಿ. ನಂದಿಮರ ಸಾಮಾನ್ಯವಾಗಿ ಮಿಶ್ರ ಪರ್ಣಪಾತಿ ಕಾಡುಗಳಲ್ಲಿ ಹೇರಳ. ನಿತ್ಯಹರಿದ್ವರ್ಣ ಕಾಡುಗಳಲ್ಲೂ ಇಲ್ಲದಿಲ್ಲ. ಹೆಚ್ಚು ಮಳೆ ಬೀಳುವ ಪ್ರದೇಶಗಳಾದ ಉತ್ತರ ಕನ್ನಡ. ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳಲ್ಲೂ ಕೇರಳದಲ್ಲೂ ಇದು ತುಂಬ ಚೆನ್ನಾಗಿ ಬೆಳೆಯುತ್ತದೆ.
ನಂದಿಮರದ ಚೌಬೀನೆ ಗಟ್ಟಿ ಮತ್ತು ಹೆಚ್ಚು ಸ್ಥಿತಿಸ್ಥಾಪಕಶಕ್ತಿಯುಳ್ಳದ್ದು; ಇದನ್ನು ಹದ ಮಾಡುವುದು ಕಷ್ಟ. ಹದ ಮಾಡುವಾಗ ತುದಿಗಳು ಸೀಳುವುದೂ ಅಂಕುಡೊಂಕಾಗುವುದೂ ಉಂಟು. ದಿಮ್ಮಿಗಳನ್ನು ನೇರ ಬಿಸಿಲಲ್ಲಾಗಲೀ ಬಿಸಿ ಗಾಳಿ ಬೀಸುವಂಥ ಸ್ಥಳಗಳಲ್ಲಾಗಲೀ ಇಡಬಾರದು. ಮರದ ತೊಗಟೆಯನ್ನು; ಸುಲಿದು 10 ತಿಂಗಳ ಅನಂತರ ಕಡಿದು, ಕೊಯ್ದ ಮುಟ್ಟುಗಳನ್ನು 18 ತಿಂಗಳ ಕಾಲ ಇಟ್ಟರೆ ಮರ ಹದವಾಗುವುದು; ಆವಿಗೆಯಲ್ಲಾದರೆ 12-15 ದಿವಸಗಳಲ್ಲಿ ಒಣಗಿಸಿ ಹದ ಮಾಡಬಹುದು. 2.5 ಸೆಂ.ಮೀ. ದಪ್ಪದ ಹಲಗೆಯನ್ನು ಒಣಗಿಸಿ ಹದ ಮಾಡುವುದು ಸುಲಭ. ಹಲಗೆಗಳು ಇದಕ್ಕಿಂತ ದಪ್ಪವಾದರೆ ಬಿರುಕು ಬಿಡುವುವು.

ಈ ಚೌಬೀನೆ ಮನೆಯೊಳಗಾಗಲೀ ಬಯಲಿನಲ್ಲಾಗಲೀ ನೀರಿನ ಸಂಪರ್ಕದಲ್ಲಾಗಲೀ ಹತ್ತು ವರ್ಷಗಳಿಗಿಂತ ಹೆಚ್ಚುಕಾಲ ಬಾಳಿಕೆ ಬರುತ್ತದೆ. ಇದಕ್ಕೆ ಗೆದ್ದಲು ಹಿಡಿಯುವುದು ನಿಧಾನ; ಬೂಷ್ಟು ರೋಗ ತಗುಲದು. ಯಂತ್ರದ ಸಹಾಯದಿಂದ ಮಾತ್ರವಲ್ಲದೆ ಕೈಯಿಂದ ಕೂಡ ಇದನ್ನು ಕೊಯ್ಯಲು ಸುಲಭ. ಚೆನ್ನಾಗಿ ಮೆರಗು ತೆಗೆದುಕೊಳ್ಳುತ್ತದೆ. ಮರದಲ್ಲಿ ಸಾಮಾನ್ಯವಾಗಿ ಗಂಟುಗಳಿರುವುದಿಲ್ಲ. ಕೆಲವು ವೇಳೆ ಮರದ ಬುಡದಲ್ಲಿ ಅಥವಾ ಕಾಂಡದ ಮೇಲ್ಭಾಗದಲ್ಲಿ ತುರುಬುಗಳು (ಬರ್ಸ್) ಕಾಣಿಸುವುದುಂಟು. ಇವನ್ನು ಕೊಯ್ದು ತೆರೆದಾಗ ಸುಂದರವಾದ ವಿನ್ಯಾಸ ತೋರುವುದು.
ಗೃಹನಿರ್ಮಾಣ, ಸೇತುವೆ, ಹಡಗು ಮತ್ತು ದೋಣಿ, ರೈಲುಗಾಡಿ, ಲಾರಿ ಬಸ್ಸುಗಳ ಮೈಕಟ್ಟು ಇತ್ಯಾದಿಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಬೆಂಕಿಕಡ್ಡಿಯ ಪೊಟ್ಟಣಗಳು, ವ್ಯವಸಾಯದ ಮುಟ್ಟುಗಳು, ಗಾಡಿ ಹಾರೆ, ಪ್ಲೈವುಡ್‍ಗಳಿಗೂ ಇದು ಉಪಯುಕ್ತವೆನಿಸಿದೆ. ಬ್ಯಾಡ್‍ಮಿಟನ್ ಮತ್ತು ಟೆನ್ನಿಸ್ ರ್ಯಾಕೆಟ್‍ಗಳಿಗೂ ಇದು ಉತ್ತಮವಾದ್ದು. ರೈಲುದಾರಿಯ ಹಾಸುಮರಗಳಿಗೂ ವಿದ್ಯುತ್ ಕಂಬಗಳಿಗೂ ಇದನ್ನು ಉಪಯೋಗಿಸುವುದುಂಟು.

ನಂದಿ ಒಳ್ಳೆಯ ಉರುವಲೂ ಹೌದು. ನಂದಿಮರದ ಎಲೆಗಳ ಹಸಿರುಗೊಬ್ಬರ ಮಾಡಿ ಅಡಕೆ ತೋಟದಲ್ಲಿ ಉಪಯೋಗಿಸುವುದಿದೆ.	
(ಬಿ.ಕೆ.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ